



ಮೊದಲೇ ಮಲೆನಾಡು ಚಂದ. ಮಳೆಗಾಲದಲ್ಲಿ ಇನ್ನೂ ಅಂದ. ಸುತ್ತಲ ಹಚ್ಚ ಹಸಿರು, ದಟ್ಟವಾಗಿ ಬೆಳೆದುಕೊಳ್ಳುವ ಕಾಡು, ನದಿ-ಕೆರೆ-ಹೊಳೆಗಳು ತುಂಬಿರುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಮುಂಗಾರು ಆರಂಭವಾದ ಕೆಲ ದಿನಗಳಲ್ಲಿ ಮಲೆನಾಡು ಜನರು ಏಡಿ, ಅಣಬೆ, ಕಳಲೆಗಾಗಿ ಹುಡುಕಾಟ ಶುರು ಮಾಡುತ್ತಾರೆ. ವರ್ಷಕ್ಕೊಮ್ಮೆ ಹೇರಳವಾಗಿ ಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುತ್ತಾರೆ. ಅಣಬೆ, ಕಳಲೆಯನ್ನು ಹುಡುಕಿದ ನಂತರ ಅದನ್ನು ಕಿತ್ತು ತರುವುದು ಸುಲಭ. ಆದರೆ ಏಡಿ ಮಾತ್ರ ಕಿಲಾಡಿ. ಅದನ್ನ ಹಿಡಿಯೋಕೆ ಹರಸಾಹಸ ಪಡಬೇಕು, ಆದ್ರೆ ನಮ್ಮ ಮಲೆನಾಡ ಮಂದಿ ಏಡಿ ಹಿಡಿಯೋದ್ರಲ್ಲಿ ಎತ್ತಿದ ಕೈ. ಎಲ್ಲರಿಗೂ ಹಿಡಿಯಲು ಆಗದಿದ್ದರೂ ಕೆಲವರು ಇದರಲ್ಲಿ ಪರಿಣತಿ ಹೊಂದಿರುತ್ತಾರೆ.